ಕ್ಯುರೇರ್

ವಿಶಾಲಾರ್ಥದಲ್ಲಿ ದಕ್ಷಿಣ ಅಮೆರಿಕದ ಇಂಡಿಯನರು ತಾವು ಬಳಸುತ್ತಿದ್ದ ಹಲವಾರು ಬಗೆಯ ಆದರೆ ಪರಸ್ಪರ ಸಂಬಂಧಪಟ್ಟ ವಿಷವಸ್ತುಗಳಿಗಿಟ್ಟಿದ್ದ ಸಾಮಾನ್ಯ ಹೆಸರು.  ನಿರ್ದಿಷ್ಟ ಅರ್ಥದಲ್ಲಿ ಲೊಗಾನಿಯೇಸೀ ಕುಟುಂಬಕ್ಕೆ ಸೇರಿದ ಸ್ಟ್ರಿಕ್ನಾಸ್ ಜಾತಿಯ ಸಸ್ಯಗಳಿಂದ ಪಡೆಯಲಾಗುವ ವಿಷವಸ್ತುವಿದು.  ಇಂಡಿಯನರು ಇದನ್ನು ಬಾಣದ ತುದಿಗೆ ಸವರಿ ಪ್ರಾಣಿಗಳನ್ನೂ ಶತ್ರುಗಳನ್ನೂ ಕೊಲ್ಲಲು ಬಳಸುತ್ತಿದ್ದರು.  ಹೆಚ್ಚಿನ ಪರಿಮಾಣದಲ್ಲಿ ಇದು ಪಟ್ಟೆಸ್ನಾಯುಗಲನ್ನು ಸಡಿಲಗೊಲಿಸುವುದಲ್ಲದೆ ಉಸಿರಾಟವನ್ನು ಕ್ಷೀಣಗೊಳಿಸುತ್ತದೆ.  ಇಲ್ಲವೆ ನಿಲ್ಲಿಸುತ್ತದೆ.  ಇದರಿಂದ ಸಾವಿನ ಸಂಭಾವ್ಯತೆ ಇದ್ದೇ ಇದೆ.

ಕಚ್ಚಾಕ್ಯುರೇರ್ ಕಂದುಬಣ್ಣದ ಇಲ್ಲವೆ ಕಪ್ಪುಬಣ್ಣದ ಅಂಟು ಅಂಟಾದ ರಾಳದಂಥ ವಸ್ತು.  ಇದಕ್ಕೆ ಒಂದು ರೀತಿಯ ಟಾರಿನಂಥ ವಾಸನೆಯಿದೆ.  ರಾಸಾಯನಿಕವಾಗಿ ಇದು ಕ್ಯೂರಿನ್, ಕ್ಯುರಾರಿನ್, ಟ್ಯೂಬೊ-ಕ್ಯುರಾರಿನ್, ಪ್ಯಾರಾ-ಕ್ಯುರಾರಿನ್, ಪ್ರೋಟೋ-ಕ್ಯುರಾರಿನ್ ಪ್ರೋಟೋ-ಕ್ಯುರಾಡಿನ್ ಇತ್ಯಾದಿ ಹಲವಾರು ಸಸ್ಯಕ್ಷಾರಗಳಿಂದ (ಆಲ್ಕಲಾಯ್ಡ್ಸ್) ಕೂಡಿದ ಜಟಿಲವಸ್ತು.

ಕ್ಯುರೇರ್ ವಿಷವಸ್ತುವಾದರೂ ಸ್ನಾಯುಗಳನ್ನು ಸಡಿಲಗೊಳಿಸುವ ಗುಣ ಇದಕ್ಕಿರುವುದರಿಂದ ನಿಯಂತ್ರಿತ ಪರಿಮಾಣಗಳಲ್ಲಿ ಶಸ್ತ್ರಚಿಕಿತ್ಸೆಯಲ್ಲೂ ಮಾನಸಿಕ ರೋಗ ನಿಯಂತ್ರಣಗಳಲ್ಲೂ ಇದನ್ನು ಬಳಸುತ್ತಾರೆ.  ಶಸ್ತ್ರಚಿಕಿತ್ಸೆಯಲ್ಲಿ ಇದನ್ನು ಅರಿವಳಿಕವಾಗಿ (ಅನೆಸ್ತೆಟಿಕ್) ಉಪಯೋಗಿಸುತ್ತಾರೆ.  ಕೆಲವುರೀತಿಯ ಪಾಶ್ರ್ವ ರೋಗಗಳಲ್ಲಿ ಸ್ನಾಯುಗಳ ಬಿಗಿತವನ್ನು ಕಡಿಮೆ ಮಾಡುವುದಕ್ಕೂ ಎಲುಬುಗಳು ಮುರಿದಾಗ ಉಂಟಾಗಬಹುದಾದ ಸ್ನಾಯುಗಳ ಎಳೆತವನ್ನು ನಿವಾರಿಸಲೂ ಇದನ್ನು ಬಳಸುವುದುಂಟು.

ಕ್ಯುರೇರನ್ನು ಸ್ನಾಯುಗಳ ಅಥವಾ ರಕ್ತನಾಳಗಳ ಮೂಲಕ ದೇಹದೊಳಕ್ಕೆ ಹೋಗುವಂತೆ ಮಾಡಬಹುದು. ಹೆಚ್ಚಿನ ಪರಿಮಾಣದಲ್ಲಿ ಇಲ್ಲವೆ ವೇಗವಾಗಿ ಚುಚ್ಚಿದರೆ ಉಸಿರಾಟ ಸಂಭವವಿರುವುದರಿಂದ ಚುಚ್ಚುವಾಗ ಎಚ್ಚರವಹಿಸಬೇಕು.
ಕ್ಯುರೇರನ್ನು ಸ್ಟ್ರಿಕ್ನಾಸ್ ಜಾತಿಯ ಸಸ್ಯಗಳಿಂದ ಮಾತ್ರವಲ್ಲದೆ ಮೆನಿಸ್ಪರ್ಮೇಸೀ ಕುಟುಂಬದ ಸಿಸಾಂಪೆಲಸ್, ಟೆಲಿಟಾಕ್ಸಿಯಮ್, ಅನಮೋಸ್ಪರ್ಮಮ್ ಮುಂತಾದ ಗಿಡಗಳು, ರೂಟೇಸಿ ಕುಟುಂಬದ ಎರಿತ್ರೊಕೈಟಾನ್, ರೂಬಿಯೇಸೀ ಕುಟುಂಬದ ಸೈಕೋಟ್ರಿಯ, ಲೆಗ್ಯೂಮಿನೋಸೀ ಕುಟುಂಬದ ಲಾಂಕೋಕಾರ್ಪಸ್, ಪೈಪರೇಸೀ ಕುಟುಂಬದ ಪೈಪರ್ ಇತ್ಯಾದಿ ಗಿಡಗಳಿಂದ ಪಡೆಯಬಹುದು.							    						(ಎಂ.ಆರ್.ಸಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ